ತೆಕ್ಕಲಕೋಟೆಯ ಆದಿಮ ಪರಿಸರದಲ್ಲಿ ಶಿಲಾಶಾಸನ ಶೋಧ:
ತೆಕ್ಕಲಕೋಟೆಯು ಇತಿಹಾಸ ಪೂರ್ವ ಕಾಲದಿಂದಲೂ ಹಲವಾರು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದ್ದು ಇತ್ತೀಚೆಗೆ ಉತ್ಖನನದಲ್ಲಿ ಆದಿಮಾನವನ ಅಸ್ಥಿಪಂಜರ ದೊರೆತ ನಂತರ ಮತ್ತಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿತು. ಪ್ರಸ್ತುತ ಉತ್ಖನನಗೊಂಡ ಸ್ಥಳವಾದ ಗೌಡರ ಮೂಲೆ ಸಮೀಪದಲ್ಲಿಯೇ ಸ್ಥಳೀಯ ಇತಿಹಾಸ ಆಸಕ್ತರಾದ ಮನೋಹರ್ ಸಿ.ಎಂ ಹಾಗೂ ಸ್ಥಳೀಯರಾದ ಮೀನ್ಗಿ ನಾಗರಾಜರವರು ಶಾಸನವೊಂದನ್ನು ಪತ್ತೆಹಚ್ಚಿದ್ದಾರೆ.
ಬೃಹತ್ ಬಂಡೆಯೊಂದರ ಮೇಲೆ ಶಾಸನವನ್ನು ಬರೆಯಲಾಗಿದ್ದು ವ್ಯಕ್ತಿಯೊಬ್ಬ ಕೆರೆಯನ್ನು ನಿರ್ಮಾಣ ಮಾಡಿರುವ ಬಗ್ಗೆ ದಾಖಲೆಯನ್ನು ಒದಗಿಸುತ್ತದೆ.
ಶಾಸನದ ವಿವರ: ಆರು ಸಾಲುಗಳನ್ನು ಒಳಗೊಂಡಿರುವ ಈ ಶಾಸನವು ಕನ್ನಡ ಲಿಪಿಯನ್ನು ಒಳಗೊಂಡಿದ್ದು ಸೂರ್ಯ ಮತ್ತು ಚಂದ್ರನ ಸಂಕೇತದೊಂದಿಗೆ ಆರಂಭವಾಗಿ "ಟೆಕಲಕೊಟೆ ನಾಡಗೌಡ ಯರೆ ತ್ರಿಜಣ ಗೌಡನ ಮಗ ಮಲಣಗೌಡನ ಮಗ ಚಿಣಗೌಡನ ಮಗ ಪ್ರಜಟನ ಮಗ ಗೌಡಪನ ಮಗ ತ್ರಿಚಣ ಚನ್ನವಿರಪ ಗೌಡನು ಕಟಿಸಿದ ಕೆರೆ" ಎಂದು ಬರೆಯಲಾಗಿದೆ. ಲಿಪಿತಜ್ಞರಾದ ಮಾರುತಿ ಭಜಂತ್ರಿರವರ ಅಧ್ಯಯನದ ಪ್ರಕಾರ ಶಾಸನದ ಲಿಪಿ ಮತ್ತು ಬರವಣಿಗೆಯ ಭಾಷೆಯನ್ನು ಆಧಾರವನ್ನಾಗಿ ಪರಿಗಣಿಸಿ ವಿಜಯನಗರ ಮತ್ತು ವಿಜಯನಗರೋತ್ತರ (೧೭ ರಿಂದ ೧೮ ನೇ ಶತಮಾನ) ಕಾಲಘಟ್ಟದಲ್ಲಿ ಬರೆಸಿರಬಹುದು ಎಂದು ಅಭಿಪ್ರಾಯ ನೀಡಿದ್ದಾರೆ.
ಶಾಸನದಲ್ಲಿ ತೆಕ್ಕಲಕೋಟೆಯ ಸ್ಥಳನಾಮವನ್ನು "ಟೆಕಲಕೊಟೆ" ಎಂದು ನಮೂದಿಸಿದ್ದು ವ್ಯಕ್ತಿಯೊಬ್ಬ (ತ್ರಿಚಣ ಚನ್ನವಿರಪ ಗೌಡ) ತಾನು ಕೆರೆಯನ್ನು ನಿರ್ಮಿಸಿದ ಸಂದರ್ಭದಲ್ಲಿ ತನ್ನ ವಂಶದ ಮತ್ತು ತನ್ನ ಪ್ರತಿಷ್ಠೆಯನ್ನ ತೋರ್ಪಡಿಸುವುದಕ್ಕಾಗಿ ತನ್ನ ವಂಶದಲ್ಲಿ ಉತ್ತಮ ರಾಜಕೀಯ ಹಿನ್ನಲೆಯನ್ನು ಹೊಂದಿರುವಂತಹ ಅಂದರೆ ವಿಜಯನಗರ ಕಾಲದಲ್ಲಿ ನಾಡಗೌಡರಾಗಿದ್ದಂತಹ ತನ್ನ ವಂಶದ ಹಿರಿಯಜ್ಜನ ಹೆಸರನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದಾನೆ ಅದರ ಜೊತೆಗೆ ಎರೆ ತ್ರಿಜನಗೌಡನ ನಂತರ ಬಂದ ವಂಶಜರು ನಾಡಗೌಡ ಎನ್ನುವಂತಹ ಹುದ್ದೆಯನ್ನು ಕಳೆದುಕೊಂಡಿರುವ ಸಾಧ್ಯತೆ ಇರುತ್ತದೆ.ನಂತರದಲ್ಲಿ ಬರುವ ಎಲ್ಲಾ ಹೆಸರುಗಳು ಗೌಡ ಎಂಬ ಪದದಿಂದ ಮುಕ್ತಾಯಗೊಂಡಿರುತ್ತವೆ.ಈ ಶಾಸನದಿಂದ ತಿಳಿದುಬರುವಂತೆ ಶಾಸನ ತಜ್ಞರ ಅಭಿಪ್ರಾಯದ ಪ್ರಕಾರ ತೆಕ್ಕಲಕೋಟೆ ಕುರುಗೋಡಿನ ಸಿಂಧರ ಕಾಲದಲ್ಲಿ ತೆಕ್ಕೆಕಲ್ಲು ೧೨ ಎಂಬ ನಾಮದೊಂದಿಗೆ ವಿಶೇಷತೆಯನ್ನು ಪಡೆದುಕೊಂಡಿದ್ದು ಆ ವಿಶೇಷತೆ ವಿಜಯನಗರ ಕಾಲದಲ್ಲಿಯೂ ಕೂಡ ಒಂದು ನಾಡು ಆಗಿ ಪ್ರಸಿದ್ಧತೆಯನ್ನು ಹೊಂದಿತ್ತು ಎಂದು ಈ ಶಾಸನದಿಂದ ತಿಳಿದುಬರುತ್ತದೆ. ಹಿರಿಯಜ್ಜರಿಂದ ತನ್ನ ಹೆಸರಿನವರೆಗೂ ಎಲ್ಲರ ಹೆಸರುಗಳನ್ನು ಶಾಸನದಲ್ಲಿ ಬರೆಸಿರುವುದು ತುಂಬಾ ವಿಶೇಷವಾದ ಮತ್ತು ಅಪರೂಪದ ಮಾಹಿತಿಯನ್ನು ಒದಗಿಸುತ್ತದೆ.
ಶಾಸನದ ಮುಂದೆಯೇ ಕೆರೆಯ ಅವಶೇಷಗಳನ್ನು ಒಳಗೊಂಡಿದ್ದು ಪ್ರಸ್ತುತದಲ್ಲಿ ಗುನ್ನಯ್ಯನ ಕೆರೆ ಎಂದು ಸಂಬೋಧಿಸಲಾಗುತ್ತಿದೆ. ವ್ಯವಸಾಯಕ್ಕಾಗಿ, ಸಾರ್ವಜನಿಕರಿಗಾಗಿ ಹಾಗೂ ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಕೆರೆಯನ್ನು ನಿರ್ಮಾಣ ಮಾಡಿದ ಮಹತ್ತರವಾದ ಕಾರ್ಯವನ್ನು ಕುರಿತಂತೆ ಸ್ಮರಿಸುವ ದಾಖಲೆಯಾಗಿದೆ. ಈ ಪ್ರದೇಶದಲ್ಲಿ ಗೌಡರು ಅಧಿಪತ್ಯವನ್ನು ಹೊಂದಿದ್ದ ಕಾರಣ ಗೌಡರ ಮೂಲೆ (ಪ್ರಸ್ತುತ) ಎಂಬ ಹೆಸರು ಬಂದಿತು ಎಂಬ ಸ್ಥಳದ ಹಿನ್ನಲೆಯನ್ನು ಅರಿಯಲು ಸಹಕಾರಿಯಾಗಿದೆ.
Comments
Post a Comment