ಮುದುಗಲ್ ಕೋಟೆಯತ್ತ ಒಂದು ಚಿತ್ತ

 

ಮುದುಗಲ್ಲ ಕೋಟೆ: 

          ರಾಯಚೂರು ಜಿಲ್ಲೆಯ ಮಸ್ಕಿಯಿಂದ ಸುಮಾರು 28 ಕಿ.ಮೀ ಅಂತರದಲ್ಲಿ ಮುದುಗಲ್ಲ ಎಂಬ ಪಟ್ಟಣವಿದೆ. ಪಟ್ಟದಲ್ಲಿನ ಪ್ರಮುಖ ಐತಿಹಾಸಿಕ ಹೆಜ್ಹೆಗುರುತೆಂದರೆ ಅದುವೇ ಬೃಹತ್ ಕೋಟೆ. ಕೋಟೆಯು ತುಂಬಾ ವಿಶಾಲವಾಗಿದ್ದು ಊರು ಸಮೀಪಿಸುತ್ತಲೇ ಕಣ್ಮನಸೆಳೆಯುವಂತಹ ಮನಮೋಹಕ ದೃಶ್ಯವು ಗೋಚರಿಸುತ್ತದೆ. ಅಂತಹ ದೃಶ್ಯ ಮತ್ತೇನಲ್ಲಾ ಅದುವೇ ಕಡುಗಲ್ಲುಗಳ ಮೇಲೆ ಸುಂದರವಾಗಿ ನಿರ್ಮಿಸಿದ ಕೋಟೆಯ ಶೈಲಿ. ಪದ್ಮಾವತ್ ಚಲನಚಿತ್ರ ನೋಡುವಾಗ ಕೋಟೆಯ ಚಿತ್ರಣಗಳು ಹೇಗಿದ್ದವೋ ಹಾಗೇ ನೋಡನೋಡುತ್ತಲೇ ಎಲ್ಲೋ ಒಂದೆಡೆ ಖುಷಿ ಅಂತೆಯೇ ಇದೆಯಲ್ಲವೆಂದು. ಕುತೂಹಲ ಹೆಚ್ಚಿತು ಹೇಗಾದರೂ ಸವಿಯಲೇಬೇಕೆಂದು ಕೋಟೆಯ ಬಳಿ ಹೋದೆವು. ಅಂದ ಹಾಗೇ ಹೇಳೋದು ಬಿಟ್ಟೆ ನನ್ನ ಜೊತೆ ಸ್ನೇಹಿತ ಚನ್ನಬಸವ ಅವರು ಕೂಡಾ ಬಂದಿದ್ದರು. ಆಯ್ತು ಈಗ ನಾವು ಕೋಟೆಯ ಬಳಿ ಬರುತ್ತಿದ್ದಂತೆಯೇ ಸುತ್ತಲೂ ಜಲದುರ್ಗವನ್ನ ಒಳಗೊಂಡಿರುವುದು ಇನ್ನೂ ಕುತೂಹಲವನ್ನ ಕೆರಳಿಸಿತು ಆದರೆ ಇಲ್ಲಿ ಬೇಸರದ ವಿಷಯವೇನೆಂದರೆ ಆ ಜಲವು ಸಂಪೂರ್ಣ ಚರಂಡಿ ಮತ್ತು ತ್ಯಾಜ್ಯ ನೀರಿನಂದಲೇ ಕೂಡಿತ್ತು. ಇರ್ಲಿ ಈಗ ಇವೆಲ್ಲಾ ಹೇಳ್ತಾ ಹೋದ್ರೆ ಪ್ರತಿಯೊಂದು ಊರಲ್ಲಿ ಇದೇ ತರನೇ ಇರ್ತವೆ. ಸರಿ ಮುಂದೆ ಪ್ರವೇಶ ದ್ವಾರದ ಬಳಿ ನಿಂತುಕೊಂಡು ನೋಡ್ತಿರುವಾಗ  ತುಂಬಾ ರೋಮಾಂಚನ ಅನುಭವ. ಆ ಶೈಲಿ, ಕಲ್ಲುಗಳ ಬಳಕೆ ಇವೆಲ್ಲಾ ಆಗಿನ ದಿನಗಳನ್ನ ನೆನಪಿಸುವಂತಿದ್ದವು. ನಿಧಾನಕ್ಕೆ ಗಮನಿಸ್ತಾ ಹೋಗೋವಾಗ ಪ್ರವೇಶ ದ್ವಾರದ ಒಳಗಡೆ ಬಲಬದಿಯಲ್ಲಿ ಮೆಟ್ಟಿಲುಗಳಿದ್ದವು ಅವುಗಳನ್ನ ಹತ್ತಿ ಮೇಲಕ್ಕೇರುವಾಗ ಸೈನಿಕರ ತಾಣಗಳನ್ನ ಗಮನಿಸಿದೆವು ನಂತರ ಇನ್ನೂ ಮೇಲಕ್ಕೆ ಹತ್ತಿದಾಗ ಅಲ್ಲೊಂದು ದೊಡ್ಡ ಫಿರಂಗಿ, ಅದರಲ್ಲೂ ವಿಶೇಷವೇನೆಂದರೆ ಫಿರಂಗಿಯ ಮೇಲೆ ಕೆಲವು ಅಕ್ಷರಗಳಿದ್ದವು. ನಾವು ಗಮನಿಸಿದಂತೆ ಸಿರಗಂಪಿ ಅಂತ ಬರೆದಿತ್ತು ಹಾಗೇ ಇನ್ನೂ ಕೆಲವು ಅಕ್ಷರಗಳಿದ್ದವು ಅವೆಲ್ಲವನ್ನೂ ತಿಳಿಯಬೇಕಿದೆ. 

ಈಗ ಒಮ್ಮೆ ಕೋಟೆಯ ಬಗ್ಗೆ ಕೆಲವು ಮಾಹಿತಿಗಳನ್ನ ಕಲೆಹಾಕಿದ್ದೆ ಅದನ್ನ ಹಂಚಿಕೊಳ್ತೇನೆ

* ಎರಡು ಸುತ್ತಿನ ಕೋಟೆಯಾಗಿದ್ದು ಆಯತಾಕಾರದಲ್ಲಿ ಕಟ್ಟಲ್ಪಟ್ಟಿದೆ.
* ಕೋಟೆಯು 1919ಅಡಿ ಉದ್ದ ಹಾಗೂ 24ಅಡಿ ಅಗಲವನ್ನ ಹೊಂದಿದ್ದು 40ಅಡಿ ಎತ್ತರ ಮತ್ತು 160ಅಡಿ ಅಗಲಗಳುಳ್ಳ 16 ಬುರುಜುಗಳಿವೆ. 
* ಸುಮಾರು 6 ಕ್ಕೂ ಹೆಚ್ಚು ಫಿರಂಗಿಗಳಿವೆ.
* ಕ್ರಿ.ಪೂ.150 ರಲ್ಲಿ ಗ್ರೀಕ್ ನ ಪ್ರವಾಸಿ ಟಾಲೆಮಿಯ "ಇಂಡಿಯನ್ ಜಿಯಾಗ್ರಫಿ" ಎಂಬ ಗ್ರಂಥದಲ್ಲಿ "ಮೂಡೋಗಲ್ಲು" ಎಂದು ಊರಿನ ಹೆಸರನ್ನು ನಮೂದಿಸಿದ್ದಾರೆ.
* ಶಾಲಿವಾಹನ ಶಕೆ ೧೦೫೩ ರಲ್ಲಿ ಮುದ್ದಪ್ಪರೆಡ್ಡಿ ಎಂಬ ಜಮೀನ್ದಾರರು ಈ ಕೋಟೆಯನ್ನು ಕಟ್ಟಿಸಿದರೆಂದು ನಿಜಾಮಶಾಹಿ ಗೆಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.
* ಈ ಕೋಟೆಯನ್ನ ಸುಮಾರು ಏಳು ಮನೆತನಗಳು ಆಳ್ವಿಕೆ ನಡೆಸಿವೆ ಅವುಗಳೆಂದರೆ ಕಲ್ಲಾಣ ಚಾಲುಕ್ಯರು, ಯಾದವರು, ಕಡಕಲ್ಲಿನ ಕದಂಬರು, ವಿಜಯನಗರದ ಅರಸರು, ಬಹಮನಿ ಆದಿಲ್ ಶಾಹಿಗಳು, ಮೊಗಲರು ಮತ್ತು ಹೈದರಾಬಾದಿನ ನವಾಬರು ಮುಂತಾದವುಗಳು.
* ಒಂದು ಕಾಲಕ್ಕೆ ಕದಂಬರ ಅರಸ ಬಿಜ್ಜರಸನ ರಾಜಧಾನಿಯಾಗಿ ಮೆರೆದ ನಗರ.
* 1327 ರಲ್ಲಿ ಮಹಮದ್ ಬಿನ್ ತುಘಲಕ್ ನ ಆಳ್ವಿಕೆಗೆ ಒಳಪಟ್ಟಿತ್ತು.
* ಸುಮಾರು ಹದಿಮೂರಕ್ಕೂ ಹೆಚ್ಚು ಯುದ್ದಗಳು ಈ ಸ್ಥಳದಲ್ಲಿ ಜರುಗಿವೆ, ಒಂದು ಯುದ್ಧವಂತೂ ಮುದಗಲ್ಲು ನಿವಾಸಿಯಾದ ಒಬ್ಬ ಸುಂದರ ಅಕ್ಕಸಾಲಿಗರ ಯುವತಿಯ ಕಾರಣಕ್ಕಾಗಿ ನಡೆದಿದೆ.
* ಮುದಗಲ್ಲಿನಲ್ಲಿರುವ ಅತಿ ಪ್ರಾಚೀನ ಶಾಸನವೆಂದರೆ ಕ್ರಿ.ಶ 1048ರ ಕಾಲದ ಕಲ್ಯಾಣಿ ಚಾಲುಕ್ಯರ ಶಾಸನ.
* ಬಹಮನಿ ಸುಲ್ತಾನರ ಕಾಲದಲ್ಲಿ "ಅಲ್-ಮಡಗಲ್" ಎಂದು ಕರೆಯಲಾಗುತ್ತಿತ್ತು, ಇದರರ್ಥ ಬಹಮನಿ ತುರ್ಕರು ಪ್ರಧಾನವಾಗಿ ತುರ್ಕೋ-ಅರಬ್ ಆಗಿದ್ದರಿಂದ ಅರೇಬಿಕ್ ಭಾಷೆಯಲ್ಲಿ " ಕೃಷಿ ಮಾಡಲ್ಪಟ್ಟ ಸ್ಥಳ" ಎಂಬುದಾಗಿತ್ತು.
* ಕೋಟೆಯು ಪ್ರಮುಖವಾಗಿ ಎರಡು ಮಹಾದ್ವಾರಗಳನ್ನು ಒಳಗೊಂಡಿದ್ದು ಉತ್ತರಾಭಿಮುಖವಾಗಿ ಫತೇದರ್ವಾಜ ( ವಿಜಯದ ಬಾಗಿಲು) ಹಾಗೇ ಪೂರ್ವಾಭಿಮುಖವಾಗಿ ಕಾಟೀದರ್ವಾಜ ( ಮುಳ್ಳಗಸಿ ಬಾಗಿಲು) ಗಳನ್ನ ಒಳಗೊಂಡಿದೆ.

       ಹೀಗೆ ಅನೇಕಾನೇಕ ಮಾಹಿತಿಗಳು ಕೋಟೆಯ ಬಗೆಗಿದ್ದು ಕೆಲವಷ್ಟೇ ದೊರೆತಿವೆ. ಆದರೂ ಪರವಾಗಿಲ್ಲ ಅಷ್ಟು ದೊಡ್ಡದಾದ ಕೋಟೆಯ ಬಗ್ಗೆ ಅರಿಯುವುದು ಸುಲಭವಲ್ಲವಲ್ಲವೇ!. ವಿಶಿಷ್ಟವಾದ ಈ ತಾಣವು ಹಿಂದೂ ಮುಸ್ಲಿಂ ರ ಶೈಲಿಗಳಿಂದ ಕೂಡಿದ್ದು ಅನೇಕ ಬುರುಜುಗಳು, ಕೊತ್ತಲಗಳನ್ನ ಹಾಗೂ ಅನೇಕ ದೇವಾಲಯಗಳನ್ನ ಮತ್ತು ಮಸೀದಿಗಳನ್ನ ಒಳಗೊಂಡಿದ್ದು ತುಂಬಾ ಆಕರ್ಷಣೀಯವಾಗಿದೆ. ಕಟೀ ದರ್ವಾಜ ಬಳಿ ನೋಡಿದಾಗ ಒಂದೆಡೆ ಸಂತೋಷ ಮತ್ತೊಂದೆಡೆ ಬೇಸರ, ಕಾರಣವೇನೆಂದರೆ  ಮಹಾದ್ವಾರದ ಒಳಗಿರುವ ಕಂಬದಲ್ಲಿನ ಉಬ್ಬುಶಿಲ್ಪಗಳ ಅಂದವನ್ನ ಹಾಳು ಮಾಡಲಾಗಿದೆ ಆದರೆ ಅಲ್ಲಿನ ಶೈಲಿಯನ್ನ ನೋಡುತ್ತಿದ್ದರೆ ಹಂಪಿಯಲ್ಲಿನ ಮಂಟಪಗಳು ನೆನಪಾಗುತ್ತವೆ. ಹಾ ಹೇಳೋದು ಮರೆತೆ ಮಹಾದ್ವಾರದಲ್ಲಿ ಮೂರು ಶಾಸನಗಳನ್ನ ನೋಡಿದೆವು ಆದರೆ ಅವುಗಳಲ್ಲಡಗಿರುವ ಮಾಹಿತಿಯು ಲಭ್ಯವಾಗಲಿಲ್ಲ. ಪರ್ವಾಗಿಲ್ಲ ಇನ್ನೊಮ್ಮೆ ಲಭ್ಯವಾದಾಗ ತಿಳಿಸುವೆ ಅಥವಾ ನಿಮಗೆ ಗೊತ್ತಿದ್ದರೆ ತಿಳಿಸಿ. ಮಹಾದ್ವಾರದಿಂದ ಹೊರಗಡೆ ಬಂದಾಗ ಗೋಚರಿಸೋದೇನೆಂದರೆ ಕೋಟೆಯು ತುಂಬಾ ಶಿಥಿಲವಾಗುತ್ತಿದೆ, ಮುಳ್ಳಿನ ಗಿಡಗಳು ಹೆಚ್ಚಾಗಿವೆ, ಆಧುನಿಕ ಪ್ರೇಮಬರಹಗಳು ಎಲ್ಲಂದರಲ್ಲೇ ಮೂಡಿವೆ, ಕಂದಕಗಳು ಶೌಚಾಲಯಗಳಾಗಿವೆ ಸಾಕು ಸಾಕು ಇನ್ನೂ ಹೆಚ್ಚು ಹೇಳಲಾರೆ. ಒಟ್ಟಾರೆಯಾಗಿ ಮುದುಗಲ್ಲ ಕೋಟೆಯನ್ನ ಮೊದಲಬಾರಿ ಕಂಡರೂ ಮತ್ತೆ ಮತ್ತೆ ನೆನಪಿಸುವಂತಹ ಸೌದರ್ಯವನ್ನ ಅಡಗಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಸಾಧ್ಯವಾದರೆ ನೀವು ಕೂಡಾ ಒಮ್ಮೆ ಹೋಗಿಬನ್ನಿ ಯಾಕೆಂದರೆ ಇರುವಾಗಲೇ ನೋಡಿಬಿಡಬೇಕು ಇಲ್ಲಾ ಅಂದರೆ ಇಲ್ಲವಾಗಬಹುದು.....

ಧನ್ಯವಾದಗಳು

ಮನೋಹರ್. ಸಿ.ಎಂ



















Comments

Popular posts from this blog

Varavina Malleshwara temple