ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯ ದಾನಶಾಸನ ಪತ್ತೆ: ತೆಕ್ಕಲಕೋಟೆ.......{ಮನೋಹರ್ ಸಿ ಎಂ ಮತ್ತು ತಂಡ}

ತೆಕ್ಕಲಕೋಟೆಯಿಂದ ದೇವಿನಗರಕ್ಕೆ ಸಂಚರಿಸುವ ಮಾರ್ಗಮಧ್ಯೆ ಬಲಬದಿಯಲ್ಲಿರುವ ಓಬುಳೇಶನ ಗುಡ್ಡದಲ್ಲಿ ಇತ್ತೀಚೆಗೆ ಕ್ಷೇತ್ರಕಾರ್ಯ ಕೈಗೊಂಡಾಗ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿನ ಶಾಸನ ಪತ್ತೆಯಾಗಿದೆ. ಸುಂದರ ಪರಿಸರದಿಂದ ಕೂಡಿದ್ದ ಈ ಬೆಟ್ಟದಲ್ಲಿ ಓಬುಳೇಶನ ದೇವಾಲಯವಿರುವ ಕಾರಣದಿಂದಾಗಿಯೇ ಜನಪದರು ಓಬುಳೇಶನ ಗುಡ್ಡ ಎಂದು ಕರೆಯುವುದು ವಾಡಿಕೆಯಾಗಿದೆ. ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಬಂಡೆಯ/ಗುಂಡಿನ ಮೇಲೆ ಶಾಸನವನ್ನ ಕೆತ್ತಲಾಗಿದೆ. ಶಾಸನವು ಶಂಖ ಮತ್ತು ಚಕ್ರಗಳ ಸಂಕೇತಗಳನ್ನು ಒಳಗೊಂಡಿದ್ದು ಸುಮಾರು ಏಳು ಸಾಲುಗಳ ಪಾಠವನ್ನು ಒಳಗೊಂಡಿದೆ. ವಿಜಯನಗರ ಸಾಮ್ರಾಜ್ಯದ ತುಳುವ ಮನೆತನದಲ್ಲಿನ  ಪ್ರಖ್ಯಾತ ಅರಸನಾಗಿದ್ದಂತಹ ಅಚ್ಯುತ ಮಹಾರಾಯನ ಆಳ್ವಿಕೆಯ ಕಾಲಕ್ಕೆಸಂಬಂಧಿಸಿದ್ದಾಗಿದೆ.

ಶಾಸನದ ವಿವರ:
ಮನ್ಮಥ ಸಂವತ್ಸರದ ಅವಧಿಯಲ್ಲಿ (ಅಂದರೆ ೧೫೩೫ ರಲ್ಲಿ) ಅಚ್ಯುತ ಮಹಾರಾಯರಿಗೆ ಪುಣ್ಯವಾಗಲೆಂದು ಶ್ರೀಮತು ಸಜಲಮುಂ ವಾರಿಜಮಾನ ಭಾಸ್ಕರ ದೇವರಿಗೆ (ಅಂದರೆ ಕಮಲದ ಮೇಲೆ ನಿಂತಿರುವಂತಹ ಭಾಸ್ಕರ ದೇವರಿಗೆ) ತೆಕ್ಕಲಕೋಟೆಯ ಹೊಕುಳರು ತ್ರಿಮುಚ ಕೋಲಿನ ಅಳತೆಯ ಹೊಲವನ್ನು ದಾನ ನೀಡಿರುವಂತೆ ತಿಳಿಸುತ್ತದೆ. ಇದಕ್ಕೆ ತಪ್ಪಿದವರು ಪಂಚ ಮಹಾಪಾತಕಕ್ಕೆ ಒಳಗಾಗುವರು ಎಂದು ಶಾಪಾಶಯವನ್ನು ಸಹಾ ಬರೆಸಲಾಗಿದೆ.

ಶಾಸನದಲ್ಲಿ ಭಾಸ್ಕರ ದೇವರನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದ್ದು ಇಲ್ಲಿನ ದೇವಾಲಯದ ಪೂರ್ವದ ಹೆಸರು ಭಾಸ್ಕರ ದೇವಾಲಯವಾಗಿತ್ತೆಂದು ತಿಳಿಯಬಹುದಾಗಿದೆ. ಕಾಲಾನಂತರದಲ್ಲಿ ಓಬುಳೇಶನ ದೇವಾಲಯವೆಂದು ಜನಪದರಿಂದ ಪ್ರಸಿದ್ದಿ ಪಡೆದಿರಬಹುದಾಗಿದೆ. ಒಟ್ಟಾರೆಯಾಗಿ ಇದೊಂದು ದಾನ ಶಾಸನವೆಂದು ತಿಳಿಯಬಹುದು. ತೆಕ್ಕಲಕೋಟೆಯ ವರವಿನ ಮಲ್ಲೇಶ್ವರ ದೇವಾಲಯದ ಬಳಿ ಇರುವ ಶಾಸನವು ಸಹಾ ಅಚ್ಯುತರಾಯನ ಆಳ್ವಿಕೆಯ ಅವಧಿಗೆ ಸಂಬಂಧಿಸಿದ್ದಾಗಿದ್ದು ಪ್ರಸ್ತುತ ಪತ್ತೆಯಾದ ಶಾಸನವು ಹೆಚ್ಚಿನ ವಿವರ  ಸಂಗ್ರಹಿಸಲು ಸಹಕಾರಿಯಾಗಿದೆ.



Comments

Popular posts from this blog

Varavina Malleshwara temple