ಶ್ರೀಯುತ ವೀರೇಂದ್ರ ರಾವಿಹಾಳ
ಶ್ರೀಯುತ ವೀರೇಂದ್ರ ರಾವಿಹಾಳ
ಹಿರಿಗೌಡರ ಮಗನ ಮದುವೆಯ ಮೆರವಣಿಗೆಯು ಅತಿ ವೈಭವದಿಂದ ಸಾಗಿ ಹೊರಟಿತ್ತು. ಹೂವಿನಿಂದ ಅಲಂಕೃತವಾದ ರಥದಲ್ಲಿ ನವದಂಪತಿಗಳು ಯುವರಾಜ-ಯುವರಾಣಿಯರಂತೆ ಕಂಗೊಳಿಸುತ್ತಿದ್ದರು. ರಥದ ಮುಂದೆ ಕಿಕ್ಕಿರಿದ ಭಾರಿ ಜನಸಮೂಹ… ಹಿರಿಗೌಡರ ಸಂಬಂಧಿಗಳು, ಗೆಳೆಯರು, ಪುರಜನರು… ಹೀಗೆ ನಭದಲ್ಲಿ ತಾರೆಗಳ ದಿಬ್ಬಣವೇ ಹೊರಟಂತ್ತಿತ್ತು. ಎಡ-ಬಲದ ಉದ್ದಕ್ಕೂ ದೀಪಾಲಂಕೃತ ಸಾಲುಗಳು ಹಿರಿಗೌಡರ ಮಗನ ಮದುವೆಯ ವೈಭವವನ್ನು ಸಾರಿ ಹೇಳುತ್ತಿದ್ದವು. ಮೆರವಣಿಗೆಯ ಮುಂಚೂಣಿಯಲ್ಲಿ ಬೆಂಗಳೂರು ಬ್ಯಾಂಡ್‌ನ ಸಿನಿಮಾ ಹಾಡು ಭರ್ಜರಿಯಾಗಿ ಸಾಗಿತ್ತು. ಇಡೀ ಊರಿಗೆ ಇದೊಂದು ಉತ್ಸವವೆನಿಸಿತ್ತು. ಕೆಲವು ಜನ ಇದನ್ನೆಲ್ಲಾ ನೋಡಿದ್ರೆ ಕಾಡಸಿದ್ದಪ್ಪನ ಜಾತ್ರೆ ನೆಪ್ಪಿಗೆ ಬರ್ತೈತೆ ಅಂದ್ರೆ ಇನ್ನೂ ಕೆಲವು ಜನ ಈ ವರ್ಷ ಊರಿನಾಗೆ ಎರಡು ಜಾತ್ರೆ ಎಂದರು.
ಇಡೀ ಊರಿಗೆ ಊರೇ ಸಂತೋಷ ಸಂಭ್ರಮ ಸಡಗರಗಳಲ್ಲಿ
ಮುಳುಗಿ ಹೋಗಿತ್ತು. ಮೆರವಣಿಗೆಯ ಮಧ್ಯದಲ್ಲಿ ಬಿಳಿವಸ್ತ್ರ ಧರಿಸಿದ್ದ ಹಿರಿಗೌಡರು ತಮ್ಮ ಹುರಿ
ಮೀಸೆಯನ್ನು ಇನ್ನಷ್ಟು ಹುರಿ ಮಾಡಿ ರಾಜಠೀವಿಯಿಂದ ಎದೆಯುಬ್ಬಿಸಿ ನಡೆದು ಬರುತ್ತಿದ್ದರು. ಗೌಡರ
ಸುತ್ತ ನೆರೆದ ಜನ ಈ ಸೀಮೇಲಿ ಇಂಥಾ ಮದುವೆನ್ನ ನಾವೆಲ್ಲೀ ಕಂಡಿಲ್ಲಾ ಗೌಡ್ರೆ ಎಂದು ಹೊಗಳುಭಟರಂತೆ
ಹೊಗಳಿ ಗೌಡರಿಂದ ತಾವೂ ಮೆಚ್ಚುಗೆ ಗಳಿಸಿ ದೇಶಾವರಿ ನಗೆ ಉಕ್ಕಿಸುತ್ತಿದ್ದರು. ಜನರ ಮಾತಿನಿಂದ
ಖುಷಿಗೊಂಡ ಗೌಡರು ಮತ್ತೊಮ್ಮೆ ತಮ್ಮ ಮೀಸೆಯನ್ನು ಹುರಿ ಮಾಡಿ ತಿರುವಿ, ಆ ಗದ್ದಲದ ಮದ್ಯೆಯೂ ತಮ್ಮ ಮೊಬೈಲನ್ನು ಕಿವಿಗೇರಿಸಿ ಗಹಗಹಿಸಿ ನಕ್ಕು ಮಾತನಾಡುತ್ತ
ನಡೆದಿದ್ದರು.
ಊರಿನ ಪ್ರತಿಯೊಂದು ಮನೆಯೊಳಗಿದ್ದ ಹೆಂಗಸರು ಮಕ್ಕಳು
ಯುವಕರು ಮುದುಕರಾದಿಯಾಗಿ ಎಲ್ಲರೂ ಹೊರಬಂದು ಅಕ್ಷತೆ ಹಾಕಿ ನವದಂಪತಿಗಳನ್ನು ಆಶೀರ್ವದಿಸಿ ಗೌಡ್ರ
ಸೊಸೆ ಥೇಟ್ ದಂತದ ಗೊಂಬೇನೇ ಸರಿ ಎಂದು ಪರಸ್ಪರ ಮಾತುಕಥೆಯಲ್ಲಿ ತೊಡಗದೆ ಇರಲಿಲ್ಲ.
ಬೆಂಗಳೂರು ಬ್ಯಾಂಡಿನ ಸದ್ದು ಮುಗಿಲ ಮೇರೆ
ಮುಟ್ಟುತ್ತಿದ್ದರೆ, ಮೆರವಣಿಗೆ ಕಾಡಸಿದ್ದೇಶ್ವರನ ಗುಡಿಯ ದಾರಿ
ಹಿಡಿದುನಡೆದಿತ್ತು. ಬ್ಯಾಂಡಿನ ಸದ್ದು ಕೇಳಿಸುತ್ತಲೇ ಗುಡಿಸಲೊಳಗೆ ಹಸಿವಿನಿಂದ ರೋಧಿಸುತ್ತಿದ್ದ
ಪುಟ್ಟ ಮತ್ತು ಪುಟ್ಟಿಯರು ಮೆರವಣಿಗೆ ನೋಡಲು ಹೆತ್ತವ್ವನೊಂದಿಗೆ ಹೊರಗೋಡಿ ಬಂದು, ಆ ವೈಭವವನ್ನು ಕಂಡು ಮೂಕ ವಿಸ್ಮಿತರಾಗಿ ನಿಂತಾಗ, ಪಕ್ಕದಲ್ಲೇ ಇದ್ದ ಬಾಳೇ ಹಣ್ಣಿನ ವ್ಯಾಪಾರಿ
ಇಮಾಂಸಾಬಿಯ ಮಗ ಖಾದರನು ಹೋಗ್ರಲೇ ಹುಡುಗ್ರಾ ಡ್ಯಾನ್ಸ್ ಮಾಡ್ತಾ ಅವರ್‍ಜೊತೆ ಹೋದ್ರೆ ಹೊಟ್ಟೇ
ತುಂಬಾ ಉಣುಬೋದು ಅನ್ನೋ ಮಾತು ಕೇಳಿದ್ದೇ ತಡ ಇಬ್ಬರಿಗೂ ಮೈಯಲ್ಲಿ ಮಿಂಚು ಹರಿದು ಕಸುವುಕ್ಕಿ
ಅಮ್ಮಾ… ಉಂಡ್ಕಂಡು ಬರ್ತೀವಿ ಎಂದು ಅಮ್ಮನಿಗೆ ಹೇಳಿ ಬ್ಯಾಂಡಿನ
ಮುಂದೆ ಬಂದು ಹಾಡಿನ ತಾಳಕ್ಕೆ ತಕ್ಕಂತೆ ಖುಷಿಯಿಂದ ಕುಣಿಯಲಾರಂಭಿಸಿದರು. ಅವರ ಕುಣಿತದ ಮೋಡಿಗೆ
ಸಿಕ್ಕು ಹೊಟ್ಟೆಯೊಳಗಿನ ಹಸಿವಿನ ಕೆಂಡವೂ ಕ್ಷಣಕಾಲ ಮರೆಯಾಗಿ ಚೈತನ್ಯ ಉಕ್ಕಿ ಹರಿಯಿತು.
ಮೆರವಣಿಗೆ ಮುಂದಿನ ಕೆಲವೇ ಕೆಲವು ನಿಮಿಷಗಳಲ್ಲಿ ಗುಡಿಸೇರುತ್ತಿತ್ತು. ಪುಟ್ಟಾ ಪುಟ್ಟಿಯರಿಬ್ಬರೂ
ಹಸಿವನ್ನು ಮರೆತು ಕುಣಿಯುತ್ತಾ ಮರವಣಿಗೆಯಲ್ಲಿಯೆ ವಿಲೀನಗೊಳ್ಳ ತೊಡಗಿದರು.
ಬ್ಯಾಂಡಿನ ಸದ್ದು ಹೆಚ್ಚಾಗತೊಡಗಿದಂತೆ ಪುಟ್ಟನ
ಮೈಯಲ್ಲೆಲ್ಲಾ ಹೊಸ ರಕ್ತ ಹರಿದಂತಾಗಿ ಮತ್ತಷ್ಟು ಕಸುವು ಕೂಡಿಕೊಂಡು ಕುಣಿಯತೊಡಗಿದ. ಬೆವರಿನಿಂದ
ಸಂಪೂರ್ಣ ತೊಯ್ದು ಹೋದ ಅಂಗಿಯನ್ನು ಬಿಚ್ಚಿ ಕೈಯಿಂದ ತಿರುಗಿಸುತ್ತಾ ಕುಪ್ಪಳಿಸಿ ಕುಪ್ಪಳಿಸಿ ಎಗರ
ತೊಡಗಿದ್ದು ಎಲ್ಲರ ಗಮನ ಸೆಳೆಯತೊಡಗಿತ್ತು. ಅಣ್ಣನ ಅವತಾರವನ್ನು ಕಂಡ ಪುಟ್ಟಿಯೂ ಖುಷಿಯಿಂದ
ನಗುತ್ತಾ ಚಪ್ಪಾಳೆ ತಟ್ಟುತ್ತಾ ಆ ಸಂತೋಷದಲ್ಲಿ ಬೆರೆತು ಹೋದಳು.
ಹಾಡಿಗೆ ತಕ್ಕಂತೆ ಕುಣಿಯುತ್ತಿದ್ದ ಪುಟ್ಟನ ಲಯಬದ್ದ
ತಾಳಕ್ಕೆ ಮಾರು ಹೋದ ಜನ ಬೆರಗಾಗಿ ಅವನನ್ನು ತಮ್ಮ ಭುಜದ ಮೇಲೆ ಎತ್ತಿ ಹಿಡಿದು ಕುಣಿದರು, ಮತ್ತೇ ಕೆಳಗಿಳಿಸಿ, ಸಿಳ್ಳು ಗೊಳ್ಳೆ ಹಾಕಿ ಅವನನ್ನು ಉರಿಗೊಳಿಸಿ
ಕುಣಿಸಲಾರಂಭಿಸಿದರು. ಆಟ ಕಟ್ಟಿದಾಗ ನಾವು ಸೈತ ಹಿಂಗ ಕುಣಿದಿರಲಿಲ್ಲ ಎಂದರು. ಮತ್ತೆ ಕೆಲವರು
ಡೊಡ್ಡವನಾದ್ಮೇಲೆ ಒಳ್ಳೆ ಆಟಗಾರ ಆಗ್ತಾನೆ ಅಂದರು. ಅಣ್ಣನ ಕುಣಿತ ಕಂಡ ಪುಟ್ಟಿಯ ಹೃದಯದಲ್ಲಿ
ಅಭಿಮಾನ, ಘನತೆ, ಪ್ರೀತಿ ಮೂಡಿದ್ದವು.
ಬ್ಯಾಂಡಿನ ಸದ್ದು ನಿಂತಾಗಲೇ ಮೆರವಣಿಗೆ
ಕಾಡಸಿದ್ದೇಶ್ವರ ಗುಡಿಯನ್ನು ತಲುಪಿದ್ದು ಗಮನಕ್ಕೆ ಬಂದು, ಕುಣಿಯುವುದನ್ನು ನಿಲ್ಲಿಸಿದ ಪುಟ್ಟ ಕೆಲವು ನಿಮಿಷಗಳ
ಕಾಲ ನಿರಾಳವಾಗಿ ಉಸಿರಾಡಿಕೊಂಡ. ನವದಂಪತಿಗಳಿಬ್ಬರೂ ಸಿದ್ದೇಶ್ವರನ ದರ್ಶನ ತೆಗೆದುಕೊಂಡು ಬಂದು
ರಥವೇರಿ ಕುಳಿತರು. ಅಲ್ಲಿಂದ ಮತ್ತೊಮ್ಮೆ ಸಾಗಿದ ಮೆರವಣಿಗೆ ಛತ್ರಕ್ಕೆ ಬಂದು ತಲುಪಿದಾಗಲೆ
ಪುಟ್ಟನ ಕುಣಿತವೂ ನಿಂತದ್ದು.
ಮೆರವಣಿಗೆ ಮುಗಿಸಿಕೊಂಡು ದಣಿದು ಬಂದ ಜನ ಹಿಂಡು
ಹಿಂಡಾಗಿ ಛತ್ರದೊಳಕ್ಕೆ ನುಗ್ಗಿದರು. ಅದಾಗಲೇ ಎಲ್ಲರಿಗೂ ಊಟಕ್ಕೆ ಅಣಿ ಮಾಡಲಾಗಿತ್ತು. ಜನ ನಾ
ಮುಂದು ತಾ ಮುಂದು ಎಂದು ಧಾವಿಸಿ ಸ್ಥಳ ಹಿಡಿದು ಕೂತರು. ಇಡೀ ಛತ್ರದ ತುಂಬೆಲ್ಲಾ ಜನರ ಗಿಜಿ ಗಿಜಿ… ಕಲರವ… ಮೊಬೈಲ್ಗಳ ರಿಂಗಣ… ಅಸ್ಪಷ್ಟ ಮಾತು-ಕತೆ. ಹೇಗೋ ಪುಟ್ಟಾ ಪುಟ್ಟಿಯರಿಬ್ಬರೂ ಒಂದೊಂದು ಸ್ಥಳ ಹಿಡಿದು ಕೂತರು.
ಸ್ವಲ್ಪ ಹೊತ್ತಿನಲ್ಲೆ ಯಾರೋ ಒಂದಿಬ್ಬರು ಬಂದು ಅವರಿಬ್ಬರನ್ನೂ ಎಬ್ಬಿಸಿ ಆ ಸ್ಥಳವನ್ನು
ಆಕ್ರಮಿಸಿಕೊಂಡರು. ನಂತರ ಪುಟ್ಟಾ ಪುಟ್ಟಿಯರಿಗೆ ಬೇರೆ ಸ್ಥಳವೇ ದೊರೆಯಲಿಲ್ಲ. ಕುಣಿದು ಬಳಲಿದ್ದ
ಅವರಿಬ್ಬರ ಹೊಟ್ಟೆಯೊಳಗೆ ಹಸಿವು ರುದ್ರ ತಾಂಡವ ನಡೆಸಿತ್ತು. ಊಟಕ್ಕೆ ಕುಳಿತವರೆಲ್ಲರನ್ನೂ ಒಂದೇ
ಸಮನೆ ಬಿಟ್ಟ ಕಣ್ಣು ಬಿಟ್ಟಂತೆಯೇ ಕಕ್ಕಾ ಬಿಕ್ಕಿಯಾಗಿ ನೋಡುತ್ತಾ ನಿಂತುಬಿಟ್ಟರು.
ಏ… ಪೀಡೆಗಳಾ ತೊಲಗ್ರಿ ಆಚೆ… ಎಂದು ಅರಚುತ್ತಾ ಬಂದ ವ್ಯಕ್ತಿಯೊಬ್ಬ ಅವರಿಬ್ಬರನ್ನೂ ಕತ್ತು ಹಿಡಿದು ಹೊರ ನೂಕಿಬಿಟ್ಟ. ನೆಲ
ಅವರಿಬ್ಬರನ್ನೂ ತಬ್ಬಿಕೊಂಡಿತು. ಪುಟ್ಟ ಮೇಲೇಳುತ್ತಾ ಕಂಬನಿ ಸುರಿಯುತ್ತಿದ್ದ ತನ್ನೆರಡೂ ಕಣ್ಣೊರೆಸಿಕೊಂಡ.
ಹಾಗೆ ನಿಧಾನಕ್ಕೆ ನಡೆಯುತ್ತಾ ಛತ್ರದ ಒಂದು ಬದಿಗೆ ಬಂದು ನಿಂತುಕೊಂಡ. ಪುಟ್ಟಿಯೂ ಅಣ್ಣನ ಭುಜ
ಹಿಡಿದು ನಿಂತಳು.
ಕೊನೆಯಲ್ಲೇನಾದರೂ ಸಿಗಬಹುದೆಂಬ ಆಸೆಯಿಂದ ಬಾಯಿ
ತೆರೆದುಕೊಂಡು ಅಲ್ಲೇ ಕಾದು ಕುಳಿತರು. ಅತ್ತೂ ಅತ್ತೂ ನಿತ್ರಾಣಗೊಂಡಿದ್ದ ಪುಟ್ಟಿ ಅಣ್ಣನ
ತೊಡೆಯಮೇಲೆ ನಿದ್ರೆ ಹೋದಳು. ಕತ್ತಲು ಬೆಳೆಯತೊಡಗಿತ್ತು.
ಒಬ್ಬೊಬ್ಬರಾಗಿ ಊಟ ಮಾಡಿ ಬಂದವರು, ಸಾವಧಾನವಾಗಿ ವೀಳ್ಯ ಮೆಲ್ಲುತ್ತಾ ಹೆಗಲ ಮೇಲಿನ ವಲ್ಲಿಯಿಂದ ತಮ್ಮ ತಮ್ಮ ಮೂತಿಯನ್ನು
ವರೆಸಿಕೊಂಡು ಡೇವಂತಾ ಡೇಗುತ್ತಾ ಮನೆಯತ್ತ ನಡೆದವರು ತಮ್ಮ ಬಾಯಿತುಂಬಾ ಊಟದ ವೈಭೋಗವನ್ನು
ಕೊಂಡಾಡಿದರು. ಕ್ರಮೇಣ ಜನ ಕರಗಲಾರಂಭಿಸಿತು. ಕತ್ತಲೆ ಆವರಿಸಿ ಜೀರುಂಡೆಗಳ ಸದ್ದು
ತೀವ್ರಗೊಳ್ಳಲಾರಂಭಿಸಿತ್ತು. ದಣಿದ ಪುಟ್ಟನ ಕಣ್ಣುಗಳು ಮಸುಕು ಮಸುಕಾಗಿ ನಿದ್ರೆ
ಆವರಿಸಿಕೊಳ್ಳತೊಡಗಿತ್ತು.
ಸ್ವಲ್ಪ ಹೊತ್ತಿನಲ್ಲೇ ಸುರ್… ಎಂದು ಚರಂಡಿಯ ಪಕ್ಕದ ತೊಟ್ಟಿಗೆ ಎಂಜಲೆಲೆಗಳನ್ನು ಸುರುವಿದ ಪರಿಣಾಮವಾಗಿ, ಅಲ್ಲೇ ಇದಕ್ಕಾಗಿಯೇ ಕಾದಿದ್ದ ಬೀದಿ ನಾಯಿಗಳು ಪರಸ್ಪರ ಕಿರುಚುತ್ತಾ ತಮ್ಮ ಪಾಲಿನ ಹಕ್ಕು
ಸಾಧಿಸಲೆಂಬಂತೆ ಹಾತೊರೆಯತೊಡಗಿದ್ದವು. ಅವುಗಳ ಸದ್ದಿಗೆ ಎಚ್ಚರಗೊಂಡ ಪುಟ್ಟ ಪುಟ್ಟಿಯರಿಬ್ಬರೂ ಆ
ನಾಯಿಗಳೆಡೆಗೆ ಕಲ್ಲು ಬೀಸುತ್ತಾ, ಅವು ಬಾಲ ಮುದುರಿಕೊಂಡು ಓಡಿ ಹೋಗುತ್ತಿದ್ದಂತೆಯೇ
ತೊಟ್ಟಿಯೆಡೆಗೆ ಓಡಿ ಬಂದು ಅದರೊಳಗೆ ಇಣುಕಿ ನೋಡಿದರು. ಅದರಲ್ಲಿ ಬಿದ್ದ ಎಂಜಲೆಲೆಗಳನ್ನು ಕಂಡು
ಸಂಭ್ರಮಿಸತೊಡಗಿದರು. ಎಷ್ಟು ಬಾಗಿದರೂ ತನ್ನ ಕೈಗೆಟುಕದ ತೊಟ್ಟಿಯೊಳಗಿನ ಎಂಜಲೆಲೆಗಳನ್ನು
ಮತ್ತಷ್ಟು ಮತ್ತಷ್ಟು ಬಾಗಿ ಎತ್ತಿಕೊಳ್ಳಲು ನಡೆಸಿದ ಪ್ರಯತ್ನದಲ್ಲಿರುವಗಲೇ, ರಾತ್ರಿ ಅಷ್ಟೊತ್ತಿನಲ್ಲೂ ಹಿರಿಗೌಡರ ಅಣತಿಯಂತೆ ಮುನ್ಸಿಪಾಲ್ಟಿಯ ವಾಹನವೊಂದು ಬಂದು ತೀರ
ಆತುರಾತುರದಲ್ಲಿ ಎಂಜೆಲೆಲೆಗಳನ್ನೆಲ್ಲಾ ಎತ್ತಿಕೊಂಡು ಬಂದಷ್ಟೇ ವೇಗದಲ್ಲಿ ಹೊರಟು ಹೋಯಿತು.
ನಿರಾಸೆಗೊಂಡ ಪುಟ್ಟಾ ಪುಟ್ಟಿ ನಿಸ್ತೇಜಗೊಂಡು ನಿಂತ ನೆಲದಲ್ಲೇ ಕುಸಿದು ಬಿದ್ದರು.
***
ಮಾರನೇದಿನ ಮುಂಜಾನೆ ಆ ಗುಡಿಸಲಿನ ಮುಂದೆ ಪುಟ್ಟಾ
ಪುಟ್ಟಿಯರಿಬ್ಬರ ದೇಹಗಳು ತಣ್ಣಗೆ ಮಲಗಿದ್ದರೆ, ನೆರೆದವರ ಕಣ್ಣುಗಳಲ್ಲಿ ಶೋಕ ಮಡುಗಟ್ಟಿತ್ತು.
ರೋಧಿಸಲೂ ಶಕ್ತವಲ್ಲದ ಹೆತ್ತೊಡಲಿನ ಆವೇದನೆಯ ಕ್ಷೀಣ ದನಿ ಶೂನ್ಯದಲ್ಲಿ ಲೀನಗೊಳ್ಳುತ್ತಿತ್ತು.
ಕೊಂಚ ಸಮಯದ ನಂತರ ಪಕ್ಕದ ಮನೆಯ ಇಮಾಂ ಸಾಬು ತನ್ನ
ಬಾಳೇಹಣ್ಣಿನ ಬಂಡಿಯನ್ನು ತಳ್ಳಿಕೊಂಡು ಬಂದು ನಿಲ್ಲಿಸಿದ. ಯಾರೋ ಒಂದಿಬ್ಬರು ಅ ಎರಡೂ
ದೇಹಗಳನ್ನು ಎತ್ತಿ ಬಂಡಿಯಲ್ಲಿ ಮಲಗಿಸಿದರು. ಇನ್ನೇನು ಎಲ್ಲಾ ಮುಗಿದೇ ಹೋಯ್ತು ಎಂಬಂತೆ ಆ ತಾಯಿ
ಮತ್ತಷ್ಟು ರೋಧಿಸತೊಡಗಿದಳು. ಕಾಡಸಿದ್ದೇಶ… ದಿಕ್ಕು ದೆಸೆ ಇಲ್ದಂಗ ಮಾಡಿದ್ಯಲ್ಲೋ ನಮ್ಮಪ್ಪನೇ… ನಿಂಗಿದು ನ್ಯಾಯಾನಾ? ಎನ್ನುತ್ತಾ ಆಕಾಶದೆಡೆ ಮುಖ ಮಾಡಿ ಎದೆ ಎದೆ
ಬಡಿದುಕೊಂಡು ಅಳಲಾರಂಭಿಸಿದಳು. ಸುಮ್ಕಿರಮ್ಮಾ… ಸಮಾಧಾನ ಮಾಡ್ಕ್ಯ… ಕಷ್ಟ ಮನುಷ್ಯರಿಗಲ್ದೆ ಮರಕ್ಕ ಬರ್ತಾವಾ? ಏನೋ ಅವುಗಳ ಋಣ ಆಟಿತ್ತು. ಬಂದ್ವು ಹೋದ್ವು. ಏನ್
ಮಾಡಾಕಾಗ್ತೈತೆ ಎಲ್ಲಾ ಆ ನಮ್ಮಪ್ಪನ ಆಟ. ಎಂದು ಮುಂತಾಗಿ ಹಲವು ಹೆಂಗರಳುಗಳು ಸಂತೈಸತೊಡಗಿದವು.
ಇಮಾಮು, ಓಂಕಾರಿ, ಸಿದ್ದ, ಸುಂಕ ಎಲ್ರೂ ಸೇರಿ ನಿಧಾನಕ್ಕೆ ಬಂಡಿಯನ್ನು
ತಳ್ಳುತ್ತಾ ನಡೆಯತೊಡಗಿದರು. ಊರಿನ ಬೀದಿಗಳಲ್ಲೆಲ್ಲಾ ಸ್ಮಶಾನ ಮೌನ ಆವರಿಸಿತ್ತು. ನಿನ್ನೆ
ಮೆರವಣಿಗೆ ನಡೆದು ಬಂದ ದಾರಿಯಲ್ಲಿಯೇ ಪುಟ್ಟಾ ಪುಟ್ಟಿಯರ ಮೆರವಣಿಗೆಯೂ ಸಾಗತೊಡಗಿತ್ತು.
ಮೇಲೆ ಆಕಾಶದಲ್ಲೊಂದಿಷ್ಟು ರಣಹದ್ದುಗಳು
ಹಾರಾಡತೊಡಗಿದ್ದವು.
-ವೀರೇಂದ್ರ ರಾವಿಹಾಳ್
ತೆಕ್ಕಲಕೋಟೆ
Comments
Post a Comment