ತುಮಟಿ ಗ್ರಾಮದಲ್ಲಿ ಅಪರೂಪದ ಹಂದಿಬೇಟೆ ವೀರಗಲ್ಲು ಶೋಧ....
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ‘ತುಮಟಿ’ ಗ್ರಾಮದಲ್ಲಿ ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಪ್ರಕಟಿತ ಹಂದಿಬೇಟೆ ವೀರಗಲ್ಲನ್ನು ಪತ್ತೆಹಚ್ಚಲಾಯಿತು. ತುಮಟಿ ಗ್ರಾಮದ ದುಗ್ಲಾದೇವಿ ಕಟ್ಟೆಯ ಮೇಲೆ ಇರಿಸಿರುವ ಹಂದಿ ಬೇಟೆ ವೀರಗಲ್ಲು ಸುಂದರ ಕೆತ್ತನೆಯಿಂದ ಕೂಡಿದೆ. ಒಂದೇ ಹಂತದಲ್ಲಿ ಪ್ರಧಾನವಾಗಿ ಕಂಡರಿಸಿರುವ ವೀರಗಲ್ಲಿನ ಬಲ ಭಾಗದಲ್ಲಿ ಕುದುರೆಯ ಮೇಲೆ ಕುಳಿತು ಹಂದಿಬೇಟೆಯಲ್ಲಿ ತೊಡಗಿರುವ ವೀರನ ಚಿತ್ರಣವಿದೆ. ಅಲಂಕಾರಿಕ ಪ್ರಭಾವಳಿಯಿಂದ ಕೂಡಿದ ವೀರಗಲ್ಲಿನಲ್ಲಿ ಶಸ್ತ್ರಧಾರಿಯಾದ ವೀರನ ಶಿರದ ಭಾಗವು ತ್ರುಟಿತವಾಗಿದ್ದು, ಸೊಂಟದಲ್ಲಿ ಬಾಕು, ಎಡ ಕೈಯಲ್ಲಿ ಕುದುರೆಯ ಲಗಾಮು ಹಿಡಿದಿದ್ದು, ಬಲ ಕೈಯಲ್ಲಿ ಈಟಿಯನ್ನು ಹಿಡಿದು ಹಂದಿ ಬೇಟೆಗೆ ಯತ್ನಿಸಿರುವಂತೆ ಚಿತ್ರಿಸಲಾಗಿದೆ. ಶಿಲ್ಪಿಯು ವೀರ ಮತ್ತು ಕುದುರೆಯನ್ನು ಪ್ರಧಾನವಾಗಿ ಚಿತ್ರಿಸಿರುವನು. ಕುದುರೆಯು ಸುಂದರವಾದ ಮುಖ ಮತ್ತು ದಷ್ಟಪುಷ್ಟವಾದ ಮೈಕಟ್ಟುನ್ನು ಹೊಂದಿದ್ದು, ಬೆನ್ನಿನ ಮೇಲೆ ಜೀನಿ, ಪಟ್ಟಿಗಳಿಂದ ಅಲಂಕಾರಗೊಳಿಸಲಾಗಿದೆ. ಹಾಗೂ ಮುಂದಿನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತರಿಸಿದ್ದು, ಹಿಂದಿನ ಕಾಲುಗಳು ನೆಲದ ಮೇಲೆ ಇರಿಸಲಾಗಿದೆ. ಪೃಷ್ಠದ ಭಾಗದಲ್ಲಿ ಉದ್ದನೆಯ ಕೂದಲಿರುವ ಬಾಲದ ಚಿತ್ರಣವನ್ನು ಶಿಲ್ಪಿಯು ಸೊಗಸಾಗಿ ಮೂಡಿಸಿದ್ದಾನೆ. ಪ್ರಾಯಶಃ ವೀರನು ಬೇಟೆಯ ಸಂದರ್ಭದಲ್ಲಿ ಮರಣವನ್ನು ಹೊಂದಿದ್ದು, ಅದನ್ನು ಸಾಂಕೇತಿಸಲು ಶಿಲ್ಪಿಯು ಕುದುರೆಯ ಮುಂದಿನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತಿಸಿದ್ದಾನೆ. ಒಟ್ಟಿನಲ್ಲಿ ಇಲ್ಲಿನ ಅನೇಕ ಬಗೆಯ ಗಿಡ ಮರಗಳನ್ನು ಹೊಂದಿರುವ ಬೆಟ್ಟ ಗುಡ್ಡಗಳ ಪ್ರದೇಶವೂ ಕಾಡು ಪ್ರಾಣಿಗಳು ವಾಸಿಸಲು ಯೋಗ್ಯವಾಗಿದ್ದು, ಹಂದಿ, ಮೊಲ, ಜಿಂಕೆಯಂತಹ ಹಲವು ಬಗೆಯ ಪ್ರಾಣಿಗÀಳು ವಾಸವಾಗಿದ್ದವು ಎಂಬ ಸಂಗತಿ ತಿಳಿಯುತ್ತದೆ. ಇದನ್ನು ಅರಿತ ವೀರನು ಅವುಗಳ ಬೇಟೆಗೆ ಸಾಕು ನಾಯಿಗಳ ಜೊತೆಗೆ ತೆರಳಿನಿದ್ದನೆಂಬ ಸಂಗತಿ ತಿಳಿಯುತ್ತದೆ. ಇದರ ಅಲಂಕಾರಿಕ ರಚನೆ ಮತ್ತು ವಿನ್ಯಾಸವನ್ನು ಗಮನಿಸಿದಾಗ ಇದು 14-15ನೆಯ ಶತಮಾನದ ಹಂದಿಬೇಟೆ ವೀರಗಲ್ಲು ಎಂದು ಹೇಳಬಹುದು. ಇದೇ ಮೊದಲ ಬಾರಿಗೆ ಸಂಡೂರು ಭಾಗದಲ್ಲಿ ವರದಿಯಾಗಿರುವ ಹಂದಿಬೇಟೆ ವೀರಗಲ್ಲು ಇದಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಸಂಡೂರು ಪ್ರದೇಶದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕರು ಹೆಚ್ಚಿನ ಅಧ್ಯಯನ ಕೈಗೊಂಡಲ್ಲಿ ಇಂತಹ ಐತಿಹಾಸಿಕ ಕುರುಹುಗಳು ಮತ್ತಷ್ಟು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಈ ವೀರಗಲ್ಲಿನ ಸಂಶೋಧನೆಯಲ್ಲಿ ಅಮೂಲ್ಯ ಸಲಹೆಗಳನ್ನು ನೀಡಿದ ಡಾ. ಡಿ.ವಿ.ಪರಮಶಿವಮೂರ್ತಿಯವರಿಗೆ ಹಾಗೂ ಕ್ಷೇತ್ರಕಾರ್ಯದಲ್ಲಿ ಸಹಾಯ ಮಾಡಿದ ನಬಿ ರಸೂಲ್ ಮತ್ತು ಪುನೀತ್ ಕುಮಾರ್ ರವರಿಗೆ ಕೃತಘ್ನತೆಗಳು.
ಸಂಶೋಧಕರು : ಮನೋಹರ ಸಿ.ಎಮ್
ಇತಿಹಾಸ ಆಸಕ್ತರು.
Comments
Post a Comment